ಆಧ್ಯಾತ್ಮವಿದ್ಯೆ 

	ಆತ್ಮವನ್ನು ಕುರಿತ ವಿದ್ಯೆ (ಆತ್ಮಾನಂ ಅಧಿಕೃತ್ಯ). ಆದರೆ ಪಾರಿಭಾಷಿಕವಾಗಿ ಉಪನಿಷತ್ತುಗಳಲ್ಲಿ ಬರುವ ಪರಬ್ರಹ್ಮಸ್ವರೂಪ ಪ್ರತಿಪಾದಕವಾದ ಭಾಗಕ್ಕೆ ಆಧ್ಯಾತ್ಮವಿದ್ಯೆಯೆಂದು ವ್ಯವಹಾರವಿದೆ. ಆತ್ಮ-ಬ್ರಹ್ಮ ಇವರ ತಾದಾತ್ಮ್ಯವನ್ನು ಗ್ರಹಿಸಿ, ತತ್ತ್ವಮಸಿ, ಅಯಮಾತ್ಮಾ ಬ್ರಹ್ಮ, ಸರ್ವಂ ಖಲ್ವಿದಂ ಬ್ರಹ್ಮ ಮೊದಲಾದ ಮಹಾವಾಕ್ಯಗಳಿಂದ ಸತ್ಪದಾರ್ಥದ ನಿರ್ಧಾರಮಾಡುವುದು ಈ ವಿದ್ಯೆಯ ಉದ್ದೇಶ. ಈ ವಿದ್ಯೆಯನ್ನು ಜನಕ, ಯಾಜ್ಞವಲ್ಕ್ಯ, ಪ್ರವಾಹಣ ಜೈವಲಿ, ಆರುಣೆ, ಮೊದಲಾದ ದ್ರಷ್ಟಾರರು ಖಚಿತಗೊಳಿಸಿದ್ದಾರೆ. ಸರ್ವಾಂತರಗತವಾದ ಆತ್ಮವೇ ಸಾಕ್ಷಾತ್ತಾಗಿ ಮತ್ತು ಅಪರೋಕ್ಷವಾಗಿ ಬ್ರಹ್ಮವಸ್ತು; ಈ ಅಕ್ಷರವಾದ ಆಕಾಶದಲ್ಲಿ ಎಲ್ಲವೂ ಓತಪ್ರೋತವಾಗಿ ಸೇರಿರುತ್ತದೆ. ಇದು ಅವಿನಾಶಿ, ನಿರ್ಗುಣ; ಕರ್ತನೂ ಅಲ್ಲ, ವಿಷಯವೂ ಅಲ್ಲ. ಉಪನಿಷತ್ತುಗಳಲ್ಲಿ ಆತ್ಮದ ಪ್ರಸ್ತಾವನೇ ಪ್ರಮುಖವಾಗಿ, ವಿಸ್ತಾರವಾಗಿ ಬರುವುದರಿಂದ ಆತ್ಮನನ್ನು ಔಪನಿಷದ ಎಂದು ನಿರ್ದೇಶಿಸುವುದುಂಟು. ಉಪನಿಷತ್ತನ್ನು ಅಧ್ಯಾತ್ಮವಿದ್ಯೆ ಎಂದು ವ್ಯವಹರಿಸುತ್ತಾರೆ. ಎಲ್ಲ ವಿದ್ಯೆಗಳಿಗಿಂತ ಅಧ್ಯಾತ್ಮವಿದ್ಯೆ ಶ್ರೇಷ್ಠವಾದುದು (ಅಧ್ಯಾತ್ಮವಿದ್ಯಾವಿದ್ಯಾನಾಂ) ಎನ್ನುವ ಕಲ್ಪನೆಯ ಹಿನ್ನೆಲೆಯಲ್ಲಿ ಯಾವುದನ್ನು ತಿಳಿದರೆ ಎಲ್ಲವೂ ತಿಳಿಯುವುದೋ (ಯಸ್ಯ e್ಞÁತೇ ಸರ್ವಂ ವಿe್ಞÁತಂ ಭವತಿ) ಎನ್ನುವ ಸೂತ್ರವಿದೆ. ಧ್ಯಾನದಿಂದ, ತನ್ಮಯಚಿತ್ತದಿಂದ ಬ್ರಹ್ಮನ ಸಾಕ್ಷಾತ್ಕಾರವಾಗುವುದರಿಂದ ಈ ವಿದ್ಯೆ ಸರ್ವಶ್ರೇಷ್ಠವಾದುದು.									  
  (ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ